ಕಮಠ : ಹಾರೀತನೆಂಬ ಬ್ರಾಹ್ಮಣನ ಮಗ. ಮಹಾತತ್ತ್ವಜ್ಞನೆಂದು ಪ್ರಸಿದ್ಧನಾಗಿದ್ದಾನೆ. ತಂದೆ ಮಹೀನಗರವೆಂಬ ಪುಣ್ಯಕ್ಷೇತ್ರದಲ್ಲಿದ್ದವ. ಅಲ್ಲಿಯ ಜನರೆಲ್ಲರೂ ನಿತ್ಯಕರ್ಮಾಚರಣೆಯಲ್ಲೂ ಅತಿಥಿ, ಅಭ್ಯಾಗತರ ಪುಜೆಯಲ್ಲೂ ನಿರತರಾಗಿದ್ದು ದೇವತೆಗಳ ಹೊಗಳಿಕೆಗೆ ಪಾತ್ರರಾದವರು. ಒಮ್ಮೆ ಹಾರೀತನ ಮನೆಗೆ ಬಂದ ಒಬ್ಬ ಅತಿಥಿ ತನಗೆ ಪ್ರಾಕೃತ ಭೋಜನಕ್ಕಿಂತ ಪರಮ ಭೋಜನವೇ ಬೇಕೆಂದು ಕೇಳಿದ. ಕಮಠ ಹಾಗೆ ಮಾಡಲು ಒಪ್ಪಿದ. ಆರು ರಸಗಳಿಂದ ಕೂಡಿ,ಐದು ಪ್ರಭೇದ ಉಳ್ಳದ್ದಾಗಿದ್ದು ಇಪ್ಪತ್ತುನಾಲ್ಕು ತತ್ತ್ವಗಳ ಗುಂಪಿನ ರೂಪದಲ್ಲಿರುವ ದೇಹರೂಪವಾದ ಕ್ಷೇತ್ರದ ತೃಪ್ತಿಯನ್ನು ಯಾವುದು ಕೊಡುವುದೋ ಅದು ಪ್ರಾಕೃತವೆನಿಸುವುದು. ಯಾವುದು ಕ್ಷೇತ್ರಜ್ಞನಾದ ಆತ್ಮನಿಗೆ ತೃಪ್ತಿಯನ್ನು ಕೊಡುವುದೋ ಅಂದರೆ ಪರಮಾತ್ಮಪ್ರೀತಿಕರವೋ ಅದು ಪರಮ ಭೋಜನವಾಗುವುದು. ಅದನ್ನೇ ಅತಿಥಿಗೆ ಕೊಡುವೆನೆಂದು ಕಮಠ ಹೇಳಿ ತಂದೆಗೆ ತೃಪ್ತಿಯಾಗುವಂತೆ ವರ್ತಿಸಿ ಅತಿಥಿಯೊಡನೆ ಜೀವದ ಉತ್ಪತ್ತಿ ವಿಚಾರವಾಗಿ ತತ್ತ್ವಾರ್ಥ ಚರ್ಚೆಯನ್ನು ಮಾಡಿದ.
ಈ ಕಥೆಯನ್ನು ನಾರದ ಸೂರ್ಯದೇವನಿಗೆ ಹೇಳುತ್ತಾನೆ.    (ಎನ್.ಎಸ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ